ಕೇ, ಜಾನ್ ವಿಲಿಯಂ

1814-1876. ಭಾರತೀಯ ವಿದ್ಯಮಾನಗಳ ಇತಿಹಾಸಕಾರ. 1814ರಲ್ಲಿ ಇಂಗ್ಲೆಂಡಿನಲ್ಲಿ ಮಿಡ್ಲ್‍ಸೆಕ್ಸ್‍ನ ಆಕ್ಟನಿನಲ್ಲಿ ಜನಿಸಿದ. ತಂದೆ ಚಾಲ್ರ್ಸ್‍ಕೇ. ವಿದ್ಯಾಭ್ಯಾಸ ಈಟನಿನಲ್ಲಿ ನಡೆಯಿತು. ಈತ 1832ರಲ್ಲಿ ಭಾರತಕ್ಕೆ ಬಂದು ಬಂಗಾಳದ ಫಿರಂಗಿ ದಳದಲ್ಲಿ ಸೇರಿಕೊಂಡು 1841ರವರೆಗೆ ಸೇವೆ ಸಲ್ಲಿಸಿದ. ಕೇಗೆ ಸೈನಿಕ ವೃತ್ತಿ ಹಿಡಿಸಲಿಲ್ಲ. ಆದ್ದರಿಂದ 1841ರಲ್ಲಿ ಅದಕ್ಕೆ ರಾಜೀನಾಮೆ ಕೊಟ್ಟು ಬರವಣಿಗೆಯಲ್ಲಿ ತೊಡಗಿದ.

	ಸಾಹಿತ್ಯ ಕ್ಷೇತ್ರದಲ್ಲಿ ಕೇ ಮಾಡಿದ ಮೊತ್ತಮೊದಲನೆಯ ಕೆಲಸವೆಂದರೆ ಕಲ್ಕತ್ತ ರಿವ್ಯೂ ಎಂಬ ಪತ್ರಿಕೆಯನ್ನು 1844ರಲ್ಲಿ ಹೊರಡಿಸಿದ್ದು. (ನೋಡಿ-ಕಲ್ಕತ್ತ ರಿವ್ಯೂ) ಅನಂತರ ಲಾಂಗ್ ಎಂಗೇಜ್‍ಮೆಂಟ್ಸ್ ಎಂಬ ಕಾದಂಬರಿ ಪ್ರಕಟವಾಯಿತು. ಈತ ಸಾಹಿತ್ಯ ವೃತ್ತಿಯನ್ನೇ ಅವಲಂಬಿಸುವ ಉದ್ದೇಶದಿಂದ 1845ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ. ಆದರೆ ಅಧಿಕಾರ ಬಿಡಲಿಲ್ಲ. 1856ರಲ್ಲಿ ಈತ ಈಸ್ಟ್ ಇಂಡಿಯ ಕಂಪನಿಯ ಅಧಿಕಾರ ವರ್ಗದಲ್ಲಿ ಸೇರಿದ. 1857ರ ಬಂಡಾಯದ ಅನಂತರ ಕಂಪನಿಯಿಂದ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಆಡಳಿತ ವರ್ಗವಾದಾಗ ಜಾನ್ ಸ್ಟೂವರ್ಟನ ಉತ್ತರಾಧಿಕಾರಿಯಾಗಿ ಭಾರತದ ರಾಜಕೀಯ ಮತ್ತು ಗುಪ್ತಚಾರಶಾಖೆಯ ಸಚಿವನಾದ. ಈತ ಆ ಶಾಖೆಯ ಆಡಳಿತವನ್ನು ವಿಚಕ್ಷಣತೆಯಿಂದ ನಡೆಸಿದ್ದನ್ನು ಮೆಚ್ಚಿ ಬ್ರಿಟಿಷ್ ಸರ್ಕಾರ 1871ರ ಮೇ 20ರಂದು ನೈಟ್ ಕಮ್ಯಾಂಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯ ಎಂಬ ಪ್ರಶಸ್ತಿ ನೀಡಿತು. ಅನಾರೋಗ್ಯದ ಕಾರಣದಿಂದಾಗಿ 1874ರಲ್ಲಿ ಸರ್ಕಾರಿ ಕೆಲಸಕ್ಕೆ ಕೇ ರಾಜಿನಾಮೆ ಕೊಟ್ಟ 1874ರ ಜುಲೈ 24ರಂದು ತನ್ನ ನಿವಾಸದ ರೋಸ್ ಹಿಲ್‍ನಲ್ಲಿ ಕಾಲವಾದ. ಕೇ 1839ರಲ್ಲಿ ಮೇರಿ ಕ್ಯಾದರೀನಳನ್ನು (1813-1893) ಮದುವೆಯಾದ. ಈಕೆ 1893ರಲ್ಲಿ ಮರಣ ಹೊಂದಿದಳು.

	ಕೇ ಖ್ಯಾತ ಬರಹಗಾರ. ನಿಯತಕಾಲಿಕ ಸಾಹಿತ್ಯಕ್ಕೆ ಈತನ ಕೊಡುಗೆ ಅಪಾರ. ಈತ ಹಿಸ್ಟೊರಿ ಆಫ್ ವಾರ್ ಇನ್ ಆಫ್ಟಾನಿಸ್ತಾನ್ ಎಂಬ ಪುಸ್ತಕವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ (1851). 1852ರಲ್ಲಿ ಬಕಲ್ಸ್ ಮೆಮ್ವಾರ್ಸ್ ಆಫ್ ದಿ ಸರ್ವಿಸಸ್ ಆಫ್ ದಿ ಬೆಂಗಾಲ್ ಆರ್ಟಿಲರಿ ಎಂಬ ಪುಸ್ತಕವನ್ನೂ 1853ರಲ್ಲಿ ಮೆಮೋರಿಯಲ್ಸ್ ಆಫ್ ಇಂಡಿಯನ್ ಗವರ್ನಮೆಂಟ್ ಎಂಬ ಪುಸ್ತಕವನ್ನೂ ಸಂಪಾದಿಸಿದ. ಅದೇ ವರ್ಷ ಅಡ್ಮಿನಿಸ್ಟ್ರೇಷನ್ ಆಫ್ ಈಸ್ಟ್ ಇಂಡಿಯ ಕಂಪೆನಿ, 1854ರಲ್ಲಿ ಲೈಫ್ ಅಂಡ್ ಕರಸ್ಪಾಂಡೆನ್ಸ್ ಆಫ್ ಚಾಲ್ರ್ಸ್ ಅಂಡ್ ಲಾರ್ಡ್ ಮೆಟ್ಕಾಫ್ (ಎರಡು ಸಂಪುಟಗಳು) ಮತ್ತು ಹೆನ್ರಿ ಸೇಂಟ್ ಜಾರ್ಜ್ ಟಕರ್ಸ್ ಲೈಫ್ ಅಂಡ್ ಕರೆಸ್ಪಾಂಡೆನ್ಸ್ ಎಂಬ ಪುಸ್ತಕಗಳು ಪ್ರಕಟವಾದುವು. ಸರ್ ಜಾನ್ ಮಾಲ್ಕಮ್ಸ್ ಲೈಫ್ ಅಂಡ್ ಕರೆಸ್ಪಾಂಡೆನ್ಸ್ ಗ್ರಂಥವನ್ನು ಎರಡು ಸಂಪುಟಗಳಲ್ಲಿ 1856ರಲ್ಲಿ ಪ್ರಕಟಿಸಿದ. ಕ್ರಿಶ್ಚಿಯಾನಿಟಿ ಇನ್ ಇಂಡಿಯ ಪ್ರಕಟವಾದ್ದು 1859ರಲ್ಲಿ. ದಿ ಆಟೋಬಯಾಗ್ರಫಿ ಆಫ್ ಮಿಸ್ ಕಾರ್ನೀಲಿಯ ನೈಟ್ 1861ರಲ್ಲಿ ಸಂಪಾದಿತವಾಯಿತು.

	ಕೇ ಯ ಹಿಸ್ಟೊರಿ ಆಫ್ ದಿ ಸಿಪಾಯ್ ವಾರ್ ಇನ್ ಇಂಡಿಯ ಉತ್ತಮ ಪುಸ್ತಕ. ಇದರ ಮೂರು ಸಂಪುಟಗಳು 1864ರಿಂದ 1876ರ ವರೆಗೆ ಪ್ರಕಟವಾದುವು. ಭಾರತದ 1857ರ ಬಂಡಾಯ ಕುರಿತ ಈ ಇತಿಹಾಸ ಸುವ್ಯವಸ್ಥಿತ ಹಾಗು ಸುಲಭ ಗ್ರಾಹ್ಯ ವ್ಯಾಖ್ಯಾನವಾಗಿದೆ. ಕೇ ರಚಿಸಿದ ಈ ಗ್ರಂಥವನ್ನು ಕರ್ನಲ್ ಜಿ.ಬಿ. ಮಲ್ಲೇಸನ್ ಪರಿಶೀಲಿಸಿ ತನ್ನ ಮತ್ತು ಕೇ ಹೆಸರುಗಳಲ್ಲಿ 1890ರಲ್ಲಿ 6 ಸಂಪುಟಗಳಲ್ಲಿ ಪ್ರಕಟಿಸಿದ. ಕೇ 1867ರಲ್ಲಿ ಲೈವ್ಸ್ ಆಫ್ ಇಂಡಿಯನ್ ಆಫೀಸರ್ಸ್ ಎಂಬ ಪುಸ್ತಕವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ. 19ನೆಯ ಶತಮಾನದಲ್ಲಿ ಭಾರತೀಯ ಇತಿಹಾಸ ರಚನೆಯ ಕಾರ್ಯದಲ್ಲಿ ತೊಡಗಿದ್ದ ಬ್ರಿಟಿಷ್ ವಿದ್ವಾಂಸರಲ್ಲಿ ಅಗ್ರಗಣ್ಯನೆಂದು ಕೇ ಪ್ರಖ್ಯಾತನಾಗಿದ್ದಾನೆ.     					
	(ಬಿ.ಎಸ್.ಎ.)